ದಕ್ಷಿಣ ಕೊರಿಯ -
ಕೊರಿಯ ಗಣರಾಜ್ಯ. ಏಷ್ಯದಲ್ಲಿ ಉತ್ತರ ಚೀನ ಮತ್ತು ಜಪಾನ್‍ಗಳ ನಡುವೆ ಇರುವ ಕೊರಿಯ ಪರ್ಯಾಯ ದ್ವೀಪದ ದಕ್ಷಿಣ ಭಾಗ. ಉತ್ತರ-ದಕ್ಷಿಣ ಕೊರಿಯಗಳನ್ನು ಸ್ಥೂಲವಾಗಿ 38ನೆಯ ಉತ್ತರ ಅಕ್ಷಾಂಶರೇಖೆ ವಿಭಾಗಿಸುತ್ತದೆ. ಇದರ ಪಶ್ಚಿಮದಲ್ಲಿ ಹಳದಿ ಸಮುದ್ರ, ಪೂರ್ವದಲ್ಲಿ  ಜಪಾನ್  ಸಮುದ್ರ, ಆಗ್ನೇಯದಲ್ಲಿ  ಕೊರಿಯ ಜಲಸಂಧಿ, ದಕ್ಷಿಣದಲ್ಲಿ  ಪೂರ್ವಚೀನ ಸಮುದ್ರ ಇವೆ. ದಕ್ಷಿಣ ಕೊರಿಯ ಉತ್ತರ ದಕ್ಷಿಣವಾಗಿ 480ಕಿ.ಮೀ. ಪೂರ್ವ ಪಶ್ಚಿಮವಾಗಿ 298ಕಿ.ಮೀ. ಇದ್ದು 1318ಕಿ.ಮೀ. ಸಮುದ್ರತೀರ ಹೊಂದಿದೆ. ಇದರ ಒಟ್ಟು ವಿಸ್ತೀರ್ಣ 99,268ಚ.ಕಿ.ಮೀ. ಜನಸಂಖ್ಯೆ 4,71,49000 (2000). ರಾಜಧಾನಿ ಸೋಲ್.      

ಮೇಲ್ಮೈಲಕ್ಷಣ : ಕೊರಿಯ ಪರ್ಯಾಯದ್ವೀಪ ಪರ್ವತಮಯ. ಕಣಿವೆಗಳೂ ಕರಾವಳಿಯ ಮೈದಾನವೂ ಕಿರಿದು. ಪರ್ವತಗಳು ಸಮುದ್ರಮಟ್ಟದಿಂದ 10,000 ಅಡಿಗಳಿಗಿಂತ ಎತ್ತರವಾಗಿಲ್ಲ. ದಕ್ಷಿಣದ ಮೈದಾನಗಳು ಉತ್ತರದವಕ್ಕಿಂತ ಹೆಚ್ಚು ವಿಶಾಲವಾಗಿವೆ. ಟೇಬೇಕ್ ಪರ್ವತ ಈ ಪರ್ಯಾಯದ್ವೀಪದಲ್ಲಿ ಪೂರ್ವತೀರದ ಬಳಿ ದಕ್ಷಿಣೋತ್ತರವಾಗಿ ಹಬ್ಬಿದೆ. ಅದರಿಂದ ಹಲವು ತಗ್ಗಾದ ಶ್ರೇಣಿಗಳು ಈಶಾನ್ಯದಿಂದ  ನೈಋತ್ಯಕ್ಕೆ ಸಾಗಿವೆ. ದಕ್ಷಿಣ ಕೊರಿಯದ ಅತ್ಯುನ್ನತ ಶಿಖರ ಹಾಲಾ ಸಾನ್. 1950ಮೀ. (6,398 ಅಡಿ) ಇರುವ ಈ ಶಿಖರ ಚೇಜೂ ದ್ವೀಪದಲ್ಲಿದೆ. ಹಾನ್, ಕುಮ್, ನಾಕ್ಟಾಂಗ್ ಮುಂತಾದ  ಮುಖ್ಯ ನದಿಗಳು ಟೇಬೇಕ್ ಪರ್ವತದಲ್ಲಿ ಹುಟ್ಟಿ ಕಣಿವೆಗಳಲ್ಲಿ ಹರಿಯುತ್ತವೆ.  ಈ  ನದೀ ಕಣಿವೆಗಳ ದಕ್ಷಿಣ ಭಾಗಗಳು ವಿಶಾಲವಾದ ತಗ್ಗುಬಯಲುಗಳು. ದಕ್ಷಿಣ ಕೊರಿಯದ ಪೂರ್ವತೀರ ಹೆಚ್ಚು ನೇರವಾಗಿದೆ. ಪಶ್ಚಿಮ ತೀರ ಅಂಕುಡೊಂಕಾಗಿ ಅನೇಕ ದ್ವೀಪಗಳಿಂದ ಕೂಡಿದೆ. ಈ ಜಟಿಲಮಯ ತೀರದಿಂದಾಗಿ  ಹಳದಿ ಸಮುದ್ರದಲ್ಲಿ ಉಬ್ಬುವಿಳಿತದ ವ್ಯಾಪ್ತಿ ಪ್ರಪಂಚದಲ್ಲೇ ಉಚ್ಚತಮವಾದ್ದು; ಸೋಲ್‍ನ ಪ್ರವೇಶದ ಬಂದರಾದ ಇಂಚಾನ್‍ನಲ್ಲಿ 30 ಅಡಿಗಳಷ್ಟು ಗರಿಷ್ಠವಾಗಿರುತ್ತದೆ.

ಕೊರಿಯ ಪರ್ಯಾಯದ್ವೀಪದ ಬಹುಬಾಗ ಪ್ರಿ - ಕೇಂಬ್ರಿಯನ್ ಯುಗದ (57,00,00,000 ವರ್ಷಗಳಿಗಿಂತ ಹಿಂದಿನದು) ಗ್ರಾನೈಟ್, ನೀಸ್ ಮುಂತಾದ ಶಿಲೆಗಳಿಂದ ಕೂಡಿದೆ.  ಚೇಜೂ ಮತ್ತು ಉಲ್ಲಂಗ್‍ಗಳು ಜ್ವಾಲಾಮುಖಿಯ ದ್ವೀಪಗಳು. ಕಾಂಗ್ವನ್ ಪ್ರಾಂತ್ಯದಲ್ಲಿ ಸಣ್ಣ ಪ್ರಮಾಣದ ಲಾವಾ ಪ್ರಸ್ಥಭೂಮಿಯೊಂದಿದೆ.  ಇಲ್ಲಿಯ ಮಣ್ಣು ಬಹುತೇಕ ಗ್ರಾನೈಟ್ ಮತ್ತು ನೀಸ್‍ನಿಂದ ಪರಿಣಮಿಸಿದಂಥದು.  ಅವಸಾದಿ ಹಾಗೂ ಜ್ವಾಲಾಮುಖಿಯ ಮೂಲಗಳಿಂದ ಬಂದದ್ದು ಬಹಳ ಕಡಿಮೆ.  ಮರಳಿನಿಂದ ಕೂಡಿದ ಮತ್ತು ಕಂದು ಬಣ್ಣದ ಮಣ್ಣು ಸಾಮಾನ್ಯ.

ವಾಯುಗುಣ :  ಖಂಡೀಯ ಪ್ರಭಾವದಿಂದಾಗಿ ಇಲ್ಲಿ ಚಳಿಗಾಲ ಹೆಚ್ಚು ತೀವ್ರ, ಬೇಸಗೆ ಹೆಚ್ಚು ಉಷ್ಣ, ದಕ್ಷಿಣಕೊರಿಯದಲ್ಲಿ ಉತ್ತರ ಕೊರಿಯದಲ್ಲಿರುವುದಕ್ಕಿಂತ ಉಷ್ಣತೆಯ ವಾರ್ಷಿಕ ವ್ಯಾಪ್ತಿ ಕಡಿಮೆ;  ತೀರಪ್ರದೇಶಕ್ಕಿಂತ ಒಳನಾಡಿನಲ್ಲಿ ಹೆಚ್ಚು.  ದಕ್ಷಿಣ ತೀರವನ್ನು ಬಿಟ್ಟರೆ ಉಳಿದ ಪ್ರದೇಶದಲ್ಲಿ ಜನವರಿಯಲ್ಲಿ ಸರಾಸರಿ ಮಾಸಿಕ ಉಷ್ಣತೆ ಬರ್ಫ ಬಿಂದುವಿಗಿಂತ ಕಡಿಮೆ ಇರುತ್ತದೆ.  ಜುಲೈಯ ಸರಾಸರಿ ಮಾಸಿಕ ಉಷ್ಣತೆ - 250ಅ (780 ಈ) ಗೆ ಏರುತ್ತದೆ.  ಸೋಲ್‍ನಲ್ಲಿ ಜನವರಿಯಲ್ಲಿ ಸರಾಸರಿ ಮಾಸಿಕ ಉಷ್ಣತೆ - 50 ಅ (230 ಈ), ಆಗಸ್ಟಿನದು 250 ಅ (780 ಈ).  ಆಗ್ನೇಯ ತೀರದಲ್ಲಿರುವ ಪೂಸಾನ್‍ನಲ್ಲಿ ಸರಾಸರಿ ಮಾಸಿಕ ಉಷ್ಣತೆ ಜನವರಿಯಲ್ಲಿ 20 ಅ (350 ಈ), ಆಗಸ್ಟಿನಲ್ಲಿ  250 ಅ (780 ).  ವಾರ್ಷಿಕ ಮಳೆ ಸ್ಥೂಲವಾಗಿ 40" - 55".  ಬೇಸಗೆಯಲ್ಲಿ ಮಳೆ ಹೆಚ್ಚು. ಅದು ಮಾನ್ಸೂನಿನ ಫಲ.  ಮಂಜಿಲ್ಲದ ದಿನಗಳು ವರ್ಷದಲ್ಲಿ 170 - 226.

ಸ್ವಾಭಾವಿಕ ಸಸ್ಯ ಪ್ರಾಣಿವರ್ಗ :  ದಕ್ಷಿಣ ಕೊರಿಯದ ವಾಯುಗುಣ ಕಾಡುಗಳು ಬೆಳೆವಣಿಗೆ ಅನುಕೂಲಕರವಾಗಿದೆ.  ಅಲ್ಲಿ ಮೂಲತಃ ಇದ್ದ ಕಾಡುಗಳನ್ನು ಸೌದೆಗಾಗಿ ಮತ್ತು ಜನಸಂಖ್ಯೆಯ ಒತ್ತಡದಿಂದಾಗಿ ಬಹುತೇಕ ಕಡಿಯಲಾಗಿದೆ.  ದಕ್ಷಿಣ ಕರಾವಳಿಯಲ್ಲಿ ಉಪೋಷ್ಣವಲಯದ ಅಗಲೆಲೆಯ ಮರಗಳ ಕಾಡುಗಳೂ ಉಳಿದೆಡೆಗಳಲ್ಲಿ  ಶಂಕುಪರ್ಣಿ  ಕಾಡುಗಳೂ ಇವೆ.  ಇಲ್ಲಿಯ ವನ್ಯ ಮೃಗಗಳು ಉತ್ತರ ಚೀನ ಹಾಗೂ ಮಂಚೂರಿಯದಲ್ಲಿರುವಂಥವು.  ಹಿಂದೆ ಇಲ್ಲಿ ಹುಲಿ, ಚಿರತೆ, ಲಿಂಕ್, ಕರಡಿ ಮುಂತಾದವು ವಿಶೇಷವಾಗಿದ್ದವು.  ಈಗ ಅವು ವಿರಳವಾಗಿವೆ.

ಜನ, ವಸತಿ, ಜೀವನ, ಧರ್ಮ :  ಕೊರಿಯದ ಜನರು ಮೂಲತಃ  ಮಧ್ಯ ಏಷ್ಯ, ಬೈಕಲ್ ಪ್ರದೇಶ ಮಂಗೋಲಿಯ ಮತ್ತು ಹಳದಿ ಸಮುದ್ರದ ಕರಾವಳಿಯ ಜನರೊಂದಿಗೆ ಸಂಬಂಧ ಹೊಂದಿದ್ದಿರಬಹುದು.  ಕೊರಿಯನರ ಮಂಗೋಲಿಯನರಂಥ ದೈಹಿಕಲಕ್ಷಣಗಳುಳ್ಳವರಾಗಿದ್ದಾರೆ.  ನೇರವಾದ ಕಪ್ಪನೆಯ ಕೂದಲು, ನೇರ ಮೂಗು, ಉಬ್ಬಿದ ದವಡೆ ಮೂಳೆ, ಕಣ್ಣು ರೆಪ್ಪೆಯ ಮಡಿಗೆ - ಇವು ಇವರ ಮುಖ್ಯ ಲಕ್ಷಣಗಳು.

ಕಳೆದ ದಶಕದಲ್ಲಿ ನಗರೀಕರಣ ತೀವ್ರವಾದ್ದರಿಂದ ಗ್ರಾಮೀಣ ಜನಸಂಖ್ಯೆ ಕಡಿಮೆಯಾಗುತ್ತಿದೆ.  ಆದಾಗ್ಯೂ ಒಟ್ಟು ಜನಸಂಖ್ಯೆಯ ಸೇ. 79 ನಗರವಾಸಿಗಳು ಸೇ. 21 ಗ್ರಾಮವಾಸಿಗಳಾvದ್ದಾರೆ.   ಜನರ ಮುಖ್ಯ  ಕಸುಬು ಕೃಷಿ.  ಮುಖ್ಯವಾಗಿ ನದೀ ಕಣಿವೆಗಳಲ್ಲೂ ಕರಾವಳಿಯ ತಗ್ಗು ನೆಲದಲ್ಲೂ ಬೇಸಾಯ ನಡೆಯುತ್ತದೆ.  ಹಳ್ಳಿಗಳು ಸಾಮಾನ್ಯವಾಗಿ ಅಡಿ ಬೆಟ್ಟಗಳ ಬುಡದಲ್ಲಿ ದಕ್ಷಿಣಾಭಿಮುಖವಾಗಿ ನಿರ್ಮಿತವಾಗಿರುತ್ತದೆ.  ಬೆಂಗಡೆಯ ಬೆಟ್ಟಗಳು ಉತ್ತರದಲ್ಲಿ ಚಳಿಗಾಳಿಯಿಂದ ರಕ್ಷಣೆ ನೀಡುತ್ತವೆ.  ಶೀಘ್ರ ನಗರೀಕರಣದಿಂದಾಗಿ ಪಟ್ಟಣ ಜೀವನದ ಸ್ವರೂಪ ಬದಲಾಗುತ್ತಿದೆ.  ಎತ್ತರದ ಕಟ್ಟಡಗಳ ಸಂಖ್ಯೆ ಬೆಳೆಯುತ್ತದೆ.  ಅದರ ಸಣ್ಣ ಮನೆಗಳೂ ಹಲವು ಅಂತಸ್ತುಗಳ ಮನೆಗಳೂ ಪಕ್ಕಪಕ್ಕದಲ್ಲೇ ಇವೆ.  ನಗರಗಳ ಬೆಳೆವಣಿಗೆಯ ವೇಗದಲ್ಲಿ ಸೌಲಭ್ಯ ಕಲ್ಪನೆ ಸಾಧ್ಯವಾಗಿಲ್ಲವಾದ್ದರಿಂದ ನೀರು ಸರಬರಾಜು,  ನಿರ್ಮಲೀಕರಣ ಮುಂತಾದ ಸಮಸ್ಯೆಗಳು - ಮುಖ್ಯವಾಗಿ ಸೋಲ್ ಮತ್ತು ಪೂಸಾನ್ ನಗರಗಳಲ್ಲಿ - ಉದ್ಭವಿಸಿವೆ.  ದಕ್ಷಿಣ ಕೊರಿಯದ ಮುಖ್ಯ ನಗರಗಳ ಜನಸಂಖ್ಯೆಗಳು (2000) ಈ ರೀತಿ ಇವೆ.  ಸೋಲ್ (ರಾಜಧಾನಿ) 1,06,12,577  ಪೂಸಾನ್ 37,98,113 ಟ್ಯಾಗೊ 2,29,040 ಇಂಚಾನ್ 18,17,919,  ಟ್ಯಾಜಾನ್ 10,49,578. ಜೋಂಜು 32,300 ಮತ್ತು ಮಾಸಾನ  4,93,731. ಏಷ್ಯದ ಇತರ ದೇಶಗಳಂತೆ ದಕ್ಷಿಣ ಕೊರಿಯದಲ್ಲೂ ಜನಸಂಖ್ಯೆ ವೇಗವಾಗಿ ವರ್ಧಿಸುತ್ತಿದೆ ಜನಸಂಖ್ಯೆಯ ಬೆಳೆವಣಿಗೆಯ ದರವನ್ನು ಗಮನಾರ್ಹವಾಗಿ ತಗ್ಗಿಸಲು ಪ್ರಯತ್ನ ಮುಂದುವರಿದಿದೆ.

ಕೊರಿಯದ ಧಾರ್ಮಿಕ ನಂಬಿಕೆ ವಿಭಿನ್ನವಾದ್ದು.  ಒಂದೇ ಕುಟುಂಬದಲ್ಲಿ ಹೆಂಗಸರು ಬೌದ್ಧಧರ್ಮವನ್ನೂ ಗಂಡಸರು ಕಾನ್‍ಪ್ಯೂಷಿಯಸ್ ಸೂತ್ರಗಳನ್ನೂ ಅನುಸರಿಸುತ್ತಿರುವುದುಂಟು.  ಕ್ರೈಸ್ತ ಮತ ಮಿಶ್ರಣವಾದ ಚಾಂದೋಗ್ಯೊ ಎಂಬ ಮತವೂ ಕ್ರೈಸ್ತಮತವೂ ತಾವೊ ಮತವೂ  19ನೆಯ ಶತಮಾನದಲ್ಲಿ ಹಬ್ಬಿದವು.  ಭೂತ, ಪ್ರೇತ, ಮತ್ತು ಉಪದೇವತೆಗಳಲ್ಲಿ ನಂಬಿಕೆಯುಳ್ಳ, ಅವನ್ನು ಮಾಂತ್ರಿಕ ಪುರೋಹಿತರು ಒಲಿಸಿಕೊಳ್ಳಬಲ್ಲರೆಂದು ನಂಬುವ, ಷಾಮನಿಸಂ ಎಂಬ ಮತ ಹಳ್ಳಿಗರಲ್ಲಿ, ಮುಖ್ಯವಾಗಿ ಹೆಂಗಸರಲ್ಲಿ ಈಗಲೂ ಪ್ರಚಾರದಲ್ಲಿದೆ.  ಹದಿನಾಲ್ಕನೆಯ ಶತಮಾನದ ಜಪಾನೀ ಬೌದ್ಧ ನಿಚಿರೆನನ ಅನುಯಾಯಿಗಳ ಚಾಂಗ ಹಾಖೋ ಎಂಬ ಉಗ್ರಸಮಾಜವೊಂದು ಅಲ್ಲಿದೆ.

ಆರ್ಥಿಕತೆ: ದಕ್ಷಿಣ ಕೊರಿಯದಲ್ಲಿ ಖನಿಜ ಸಂಪತ್ತು ಅಧಿಕವಾಗಿಲ್ಲ.  ಕಬ್ಬಿಣ ಅದುರು  ಮತ್ತು  ಟಂಗ್‍ಸ್ಟನ್ ಕಾಂಗ್ವನ್ ಪ್ರಾಂತ್ಯದಲ್ಲೂ  ಚಿನ್ನ ಮತ್ತು ಬೆಳ್ಳಿ ಚನ್‍ಚನ್ ಮತ್ತು ಕಯಾಂಗ್‍ಸಾಂಗ್ ಪ್ರಾಂತ್ಯಗಳಲ್ಲೂ ದೊರಕುತ್ತವೆ.  ದಕ್ಷಿಣ ಕೊರಿಯ ಇತರ ಖನಿಜಗಳು ಕಲ್ಲಿದ್ದಲು, ಗ್ರಾಫೈಟ್, ಸೀಸ ಮತ್ತು ಸತು.  ಕಬ್ಬಿಣ ಅದುರು ಜಪಾನಿಗೂ ಟಂಗ್‍ಸ್ಟನ್ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೂ ನಿರ್ಯಾತವಾಗುತ್ತವೆ. ದಕ್ಷಿಣ ಕೊರಿಯದ ಜನಸಂಖ್ಯೆಯಲ್ಲಿ ಸುಮಾರು ಅರ್ಧ ಭಾಗ ಕೃಷಿನಿರತವಾಗಿದೆ.  ಸ್ಥೂಲವಾಗಿ ಒಟ್ಟು  ನೆಲದ ಕಾಲುಭಾಗ ಸಾಗುವಳಿಗೆ ಒಳಪಟ್ಟಿದೆ.  ಬತ್ತ ಅತ್ಯಂತ ಮುಖ್ಯ ಬೆಳೆ.  ಒಟ್ಟು ಕೃಷಿನೆಲದ ಸೇಕಡ 40 ರಷ್ಟು ಭಾಗದಲ್ಲಿ ಬತ್ತ ಬೆಳೆಯುತ್ತಾರೆ.  ಇತರ ಬೆಳೆಗಳು ಬಾರ್ಲಿ, ಗೋದಿ, ಸೊಯ ಹುರುಳೀ ಮುಂತಾದವು.  ಕಯಾಂಗ್‍ಸಾಂಗ್ ಮತ್ತು ಚಾಲ ಪ್ರಾಂತ್ಯಗಳಲ್ಲಿ ವರ್ಷಕ್ಕೆ ಬತ್ತ ಬಾರ್ಲಿಗಳ ಎರಡು ಬೆಳೆ ತೆಗೆಯುತ್ತಾರೆ.  ದಕ್ಷಿಣ ಕೊರಿಯದ ಸ್ಥೂಲ ರಾಷ್ಟ್ರೀಯ ಉತ್ಪನ್ನದಲ್ಲಿ ನಾಲ್ಕನೆಯ ಒಂದಕ್ಕಿಂತ ಹೆಚ್ಚು ಭಾಗ ಬರುವುದು ಕೃಷಿ, ಅರಣ್ಯಗಾರಿಕೆ ಹಾಗೂ  ಮೀನುಗಾರಿಕೆಯಿಂದ.

1962 ರಲ್ಲಿ ಆರಂಭವಾದ ಪಂಚವಾರ್ಷಿಕ ಆರ್ಥಿಕ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ದಕ್ಷಿಣ ಕೊರಿಯದಲ್ಲಿ ಗಣಿಗಾರಿಕೆಯೂ ಕೈಗಾರಿಕೆಗಳೂ ಬೆಳೆಯುತ್ತಿವೆ.  ರಾಸಾಯನಿಕ, ಲೋಹ ಮತ್ತು ಯಂತ್ರ ತಯಾರಿಕೆಯಂಥ ಬಾರಿ ಕೈಗಾರಿಕೆಗಳು ಬೆಳೆವಣಿಗೆ ಹೊಂದುತ್ತಿವೆ.  ಅತ್ಯಂತ ಮುಖ್ಯವಾದ್ದು ಜವಳಿ ಕೈಗಾರಿಕೆ ದಕ್ಷಿಣ ಕೊರಿಯದಿಂದ ನಿರ್ಯಾತವಾಗುವ ಕೈಗಾರಿಕಾ ಸರಕುಗಳಲ್ಲಿ ಅರ್ಧಭಾಗ  ಜವಳಿ, ವಿದ್ಯುಚ್ಛಕ್ತಿ, ರಸಗೊಬ್ಬರ, ತೈಲ ಪರಿಷ್ಕರಣವೇ ಮುಂತಾದ ಬೃಹತ್ ಕೈಗಾರಿಕೆಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ.  ಮಧ್ಯಮ ಗಾತ್ರದ ಹಾಗೂ ಸಣ್ಣ  ಕೈಗಾರಿಕೆಗಳೂ ಖಾಸಗಿ ಒಡೆತನದಲ್ಲಿವೆ.  ಕಾರ್ಮಿಕ ಚಳವಳಿ ಅಷ್ಟಾಗಿ ಬೆಳೆದಿಲ್ಲ.

ದಕ್ಷಿಣಕೊರಿಯದ ಶಕ್ತಿಮೂಲಗಳು ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ಜಲವಿದ್ಯುತ್ ವಿಭವ.  1961-71 ರಲ್ಲಿ ದಕ್ಷಿಣ ಕೊರಿಯದ ವಿದ್ಯುಚ್ಛಕ್ತಿಯ ಉತ್ಪಾದನೆ ಐದು ಮಡಿ ಅಧಿಕವಾಯಿತು.  ಜಲವಿದ್ಯುತ್ತಿಗಿಂತ  ಶಾಖ ವಿದ್ಯುತ್ತೇ ಹೆಚ್ಚು ಮುಖ್ಯವಾಗಿದೆ.  ಜಲವಿದ್ಯುತ್ ಕೇಂದ್ರಗಳು ಸೋಲ್ ಬಳಿ ಹಾನ್‍ಗಾಂಗ್‍ನ ಉದ್ದಕ್ಕೂ ಸ್ಥಾಪಿತವಾಗಿವೆ.
ದಕ್ಷಿಣ ಕೊರಿಯದ ಸಾರಿಗೆ ವ್ಯವಸ್ಥೆ ಈಚೆಗೆ ಅಭಿವೃಧ್ಧಿ ಹೊಂದಿದೆಯಾದರೂ ಅದರ ಅಗತ್ಯವನ್ನು ಇನ್ನೂ ಸಂಪೂರ್ಣವಾಗಿ  ಪೂರೈಸಲಾರದು.  ರಸ್ತೆ ಸಾರಿಗೆ ಗ್ರಾಮಪ್ರದೇಶಗಳಿಗೆ ಬಹಳ ಮಟ್ಟಿಗೆ ಸಂಪರ್ಕ ಕಲ್ಪಿಸಿದೆ.  ಕಳೆದ ಐದು ವರ್ಷಗಳಲ್ಲಿ ಆಂತರಿಕ ವಿಮಾನ ಸಾರಿಗೆ ಬೆಳೆಯುತ್ತಿದೆ.  ಪೂಸಾನ್, ಟ್ಯಾಗೂ, ಗ್ವಾಂಜೂ ಮುಂತಾದ ನಗರಗಳಿಗೆ ವಿಮಾನಗಳು ಹೋಗಿಬರುತ್ತವೆ.  ಸೋಲ್ ಬಳಿಯ ಕಿಂಪೋಸ್‍ನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ.  ಕೊರಿಯದ ರೈಲುಮಾರ್ಗಗಳು ಬಹುತೇಕ ಸರ್ಕಾರಿ ಒಡೆತನದಲ್ಲಿವೆ.  1972 ರಲ್ಲಿದ್ದ ರೈಲುಮಾಗರ್ಗಗಳ ಉದ್ದ 3,500 ಮೈ.  ಸೋಲ್ - ಪೂಸಾನ್ ನಡುವೆ ಜೋಡಿ ರೈಲುಮಾರ್ಗವಿದೆ.  ಇದು ಟ್ಯಾಜಾನಿನೊಂದಿಗೂ ಸಂಪರ್ಕ ಕಲ್ಪಿಸುತ್ತದೆ.  ಸೋಲ್ - ಇಂಚಾನ್ ನಡುವೆಯೂ ಜೋಡಿ ಮಾರ್ಗವಿದೆ.  ದಕ್ಷಿಣ ಕೊರಿಯದಲ್ಲಿ ಕರಾವಳಿ ಸಮುದ್ರಯಾನ ಪ್ರಾಮುಖ್ಯ ಪಡೆದಿದೆ.  ಮುಖ್ಯ ಬಂದರುಗಳು ಪೂಸಾನ್, ಇಂಚಾನ್ ಮತ್ತು ಮಾಸಾನ್.

ದಕ್ಷಿಣ ಕೊರಿಯದಲ್ಲಿ ಮೆಟ್ರಿಕ್ ತೂಕ - ಅಳತೆ ಪದ್ಧತಿ ಜಾರಿಯಲ್ಲಿದೆ.  ಅದರ ನಾಣ್ಯ ವಾನ್.  1 ವಾನ್ = 10 ಹ್ವಾನ್ = 100 ಚನ್.

ಸಂವಿಧಾನ, ಆಡಳಿತ :  ಕೊರಿಯ ಗಣರಾಜ್ಯ ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಾದರಿಯದು.  ವಿಧಾನಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಅಧಿಕಾರಗಳನ್ನು ಪ್ರತ್ಯೇಕಿಸಲಾಗಿದೆ.  ಅಧ್ಯಕ್ಷನಲ್ಲಿ ಅಧಿಕಾರ ಕೇಂದ್ರೀಕೃತವಾಗಿದೆ.  ಅವನು ರಾಷ್ಟ್ರಪತಿ, ಕಾರ್ಯಾಂಗದ ನೇತಾರ, ಸಶಸ್ತ್ರ ಪಡೆಗಳ ಮಹಾದಂಡನಾಯಕ.  ಪ್ರಧಾನ ಮಂತ್ರಿಯನ್ನೂ ಸಂಪುಟವನ್ನೂ ಅಧ್ಯಕ್ಷ ನೇಮಕ ಮಾಡುತ್ತಾನೆ.  ದೇಶದ ಪರಮೋಚ್ಚ ವಿಧಾನಾಂಗ ರಾಷ್ಟ್ರೀಯ ಸಭೆ.  ಪ್ರಾಂತೀಯ ಗವರ್ನರುಗಳನ್ನೂ ಕೇಂದ್ರ ಸರ್ಕಾರ ನೇಮಕಮಾಡುತ್ತದೆ.  ಸ್ಥಳೀಯ ಡೆಮೊಕ್ರಾಟಿಕ್ ಸಂವಿಧಾನದಲ್ಲಿ  ಅವಕಾಶವಿದೆ.  ದೇಶದ ಪ್ರಧಾನ ಪಕ್ಷಗಳು ಡೆಮೊಕ್ರಾಟಿಕ್ ರಿಪಬ್ಲಿಕನ್ ಪಕ್ಷ (ಆಳುವ ಪಕ್ಷ) ಮತ್ತು ನ್ಯೂ ಡೊಮೊಕ್ರಾಟಿಕ್  ಪಕ್ಷ.

ನ್ಯಾಯಾಂಗದಲ್ಲಿ ಪರಮೋಚ್ಚ ನ್ಯಾಯಾಲಯವೂ ಮೂರು ಅಪೀಲು ನ್ಯಾಯಾಲಯಗಳೂ ಹನ್ನೊಂದು ಜಿಲ್ಲಾ ನ್ಯಾಯಾಲಯಗಳು ಒಂದು ಕುಟುಂಬ ನ್ಯಾಯಾಲಯವೂ ಇವೆ.  ಸಂವಿಧಾನ ಮತ್ತು ಎಲ್ಲ ರಾಜ್ಯ ಕಾನೂನುಗಳನ್ನೂ ಸರ್ಕಾರದ ನಿಬಂಧನೆಗಳು ಮತ್ತು ಕಲಾಪಗಳನ್ನೂ ಪರಿಶೀಲಿಸುವ ಅಧಿಕಾರ ಪರಮೋಚ್ಛ ನ್ಯಾಯಾಲಯಕ್ಕೆ ಇದೆ.

ಶಿಕ್ಷಣ, ಜನಾರೋಗ್ಯ, ಕಲ್ಯಾಣ :  ಆರು ವರ್ಷಗಳ ಪ್ರಾಥಮಿಕ ಶಿಕ್ಷಣ ಉಚಿತ ಮತ್ತು ಕಡ್ಡಾಯ.  1970 ರಲ್ಲಿ ಸೇ.  97 ರಷ್ಟು ಶಾಲಾಮಕ್ಕಳು ಶಾಲೆಗೆ ಹೋಗುತ್ತಿದ್ದರು.  ಪ್ರಾಥಮಿಕ ಶಾಲೆಯ ಅಂತಿಮ ಹಂತದಿಂದ ಸೇ. 68 ರಷ್ಟು ವಿದ್ಯಾರ್ಥಿಗಳು ಮಾಧ್ಯಮಿಕ ಶಾಲೆಗಳಿಗೂ (ಮೂರು ವರ್ಷ) ಅವುಗಳ ಅಂತಿಮ ಹಂತದ ವಿದ್ಯಾರ್ಥಿಗಳ ಪೈಕಿ ಸೇ. 70 ರಷ್ಟು ಮಂದಿ ಪ್ರೌಢಶಾಲೆ ಅಥವಾ ತಾಂತ್ರಿಕ ಶಾಲೆಗಳಿಗೂ ಹೋಗುತ್ತಾರೆ.  ಪ್ರೌಢಶಾಲೆಯಿಂದ ಉತ್ತೀರ್ಣರಾದವರಲ್ಲಿ ಸುಮಾರು ಸೇ. 38 ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸೇರುತ್ತಾರೆ.  ದಕ್ಷಿಣ ಕೊರಿಯದಲ್ಲಿ 72 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳೂ 34 ಕಿರಿಯ ತಾಂತ್ರಿಕ ಕಾಲೇಜುಗಳೂ ಇವೆ.  1972 ರಲ್ಲಿ ಒಟ್ಟು 1,80,000 ವಿದ್ಯಾರ್ಥಿಗಳಿದ್ದರು.

ದೇಶದ ಅಗತ್ಯಕ್ಕೆ ತಕ್ಕಷ್ಟು ವೈದ್ಯಕೀಯ ಸೌಲಭ್ಯಗಳಿಲ್ಲ.  ವೈದ್ಯಶಿಕ್ಷಣ ಪಡೆದವರು ಅನ್ಯದೇಶಗಳಿಗೆ ಉದ್ಯೋಗಾರ್ಥಿಗಳಾಗಿ ಹೋಗುತ್ತಿರುವುದು ಒಂದು ಕಾರಣ.  ದಕ್ಷಿಣ ಕೊರಿಯದಲ್ಲಿ 1970ರಲ್ಲಿ 14,000 ವೈದ್ಯರಿದ್ದರು (ಪ್ರತಿ 10,000 ಮಂದಿಗೆ 4.8 ವೈದ್ಯರು) 4,500 ವೈದ್ಯರುವಿದೇಶಗಳಲ್ಲಿ, ಮುಖ್ಯವಾಗಿ ಅಮೆರಿಕದಲ್ಲಿ, ವೃತ್ತಿನಿರತವಾಗಿದ್ದರು.

ಸರ್ಕಾರದ ಕಲ್ಯಾಣ ಕಾರ್ಯ ಸೀಮಿತವಾದ್ದು.  ಅಂಗವಿಕಲರು, ಗಾಯಗೊಂಡ ಯೋಧರು, ಯುದ್ಧದ ಫಲವಾಗಿ ವಿಧವೆಯಾದವರು ಮುಂತಾದವರಿಗೆ ಸರ್ಕಾರ ಸಾಮಾಜಿಕ ಪರಿಹಾರ ನೀಡುತ್ತದೆ.  ವೃದ್ಧರು, ಅನಾಥ ಶಿಶುಗಳು ಮುಂತಾದವರಿಗೆ  ಇವು ನೀಡುವ ಅನೇಕ ಖಾಸಗಿ ಸಂಸ್ಥೆಗಳಿವೆ.

ಸಂಸ್ಕøತಿ, ಕಲೆ, ಇತ್ಯಾದಿ :  ಷಾಮನಿಸಮ್, ಬೌದ್ಧ ಮತ ಮತ್ತು ಕಾನ್‍ಫ್ಯೂಷಸನ ತತ್ತ್ವಗಳು ಕೊರಿಯದ ಸಂಸ್ಕøತಿಗೆ ಹಿನ್ನೆಲೆಯಾಗಿವೆ.  ಆಧುನಿಕ ವಿಚಾರಗಳ ಪ್ರಭಾವವೂ ಅಧಿಕವಾಗುತ್ತಿದೆ.  ಚೀನೀ ಪ್ರಭಾವಕ್ಕೆ ಈ ದೇಶ ಹಿಂದಿನಿಂದಲೂ ಒಳಗಾಗಿದ್ದರೂ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿವೆ. ಸೋಲ್, ಕಯಾಂಗ್‍ಜು, ಪೂಯ, ಕಾಂಗ್‍ಜು ಮತ್ತು ಚಾಂಜುಗಳಲ್ಲಿ ರಾಷ್ಟ್ರೀಯ ವಸ್ತುಸಂಗ್ರಹಾಲಯಗಳಿವೆ.  ಕೊರಿಯ ಸಂಸ್ಕøತಿಯ ಪ್ರತೀಕವಾದ ಪ್ರಾಚೀನ ಅರಮನೆಗಳೂ ಬೌದ್ಧಮಂದಿರಗಳೂ ಶಿಲಾ ಗೋರಿಗಳು ಪಗೋಡಗಳು ಅನೇಕ ಕಡೆಗಳಲ್ಲಿವೆ.  ಕೊಗೂರ್ಯೊದಲ್ಲಿಯ ದೊರೆಗಳ ಗೋರಿಗಳಲ್ಲಿರುವ  ಭಿತ್ತಿ ವರ್ಣಚಿತ್ರಗಳು (ಕ್ರಿ.ಪೂ 37 - ಕ್ರಿಶ. 688) ಅತ್ಯಂತ ಪ್ರಾಚೀನವಾದುವು.  ಕೋರ್ಯೊ ರಾಜವಂಶದ ಆಳ್ವಿಕೆಯ ಅವಧಿಯಲ್ಲಿ  (918 - 1392) ಕೊರಿಯದ ಕುಂಭಕಲೆ ವಿಶೇಷವಾಗಿ ಪ್ರವರ್ಧಮಾನವಾಗಿತ್ತು.  ದಕ್ಷಿಣ  ಕೊರಿಯದ ವಿಶಿಷ್ಟ ಜನಪದ ನೃತ್ಯಗಳೂ ಸಂಗೀತವೂ ವಾದ್ಯಗಳೂ ಈಗಲೂ ಪ್ರಚಾರದಲ್ಲಿವೆ.  ಜನಪದ ಸಂಗೀತವನ್ನು ರಕ್ಷಿಸಲು ಸರ್ಕಾರ ರಾಷ್ಟ್ರೀಯ ಅಭಿಜಾತ ಸಂಗೀತ ಸಂಸ್ಥೆಯನ್ನು ಸ್ಥಾಪಿಸಿದೆ.  ಪಾಶ್ಚಾತ್ಯ ಸಂಗೀತ ಜನಪ್ರಿಯವಾಗುತ್ತಿದೆ.
ದಕ್ಷಿಣ ಕೊರಿಯದಲ್ಲಿ  ರಾಷ್ಟ್ರೀಯ ದಿನಪತ್ರಿಕೆಗಳುಂಟು.  ಇವುಗಳಲ್ಲಿ ಇಂಗ್ಲಿಷ್ ಭಾಷೆಯವು.  ಸ್ಥಳೀಯ ಪತ್ರಿಕೆಗಳೂ ಇವೆ.  ಆಕಾಶವಾಣಿ ಪ್ರಸಾರ ಕೇಂದ್ರಗಳೂ 3 ದೂರದರ್ಶನ ಕೇಂದ್ರಗಳೂ ಇವೆ.

ಇತಿಹಾಸ:  1910 ರಿಂದ 1945 ರವರೆಗೆ ಕೊರಿಯ ರಾಜಪ್ರಭುತ್ವ ಜಪಾನಿಗೆ ಅಧೀನವಾಗಿತ್ತು.  ಎರಡನೆಯ ಮಹಾಯುದ್ಧದ ಅಂತಿಮ ಘಟ್ಟದಲ್ಲಿ ಸೋವಿಯೆತ್ ಸೈನ್ಯಗಳು ಕೊರಿಯದ ಉತ್ತರ ಭಾಗವನ್ನೂ ಅಮೆರಿಕನ್ ಸೈನ್ಯಗಳು ದಕ್ಷಿಣ ಭಾಗವನ್ನೂ ಆಕ್ರಮಿಸಿಕೊಂಡುವು.  ಕೊರಿಯದ ಎರಡು ಭಾಗಗಳನ್ನು ಒಂದುಗೂಡಿಸುವ ಪ್ರಯತ್ನಗಳ ಸಫಲವಾಗಲಿಲ್ಲ.  1948 ರಲ್ಲಿ ವಿಶ್ವ ಸಂಸ್ಥೆಯ  ಆಶ್ರಯದಲ್ಲಿ ದಕ್ಷಿಣ ಕೊರಿಯದಲ್ಲಿ  ಚುನಾವಣೆಗಳು ನಡೆದುವು.  ರಾಷ್ಟ್ರೀಯ ಸಭೆಯಿಂದ ಸಂವಿಧಾನ ರಚನೆಯಾಯಿತು.  ಅಲ್ಲಿ ಗಣರಾಜ್ಯ ಸರ್ಕಾರ ಏರ್ಪಟ್ಟಿತು.  ಸಿಂಗಮನ್ ರ್ಹೀ ದಕ್ಷಿಣ ಕೊರಿಯದ ಅಧ್ಯಕ್ಷರಾಗಿ ಚುನಾಯಿತರಾದರು.

ಉತ್ತರ - ದಕ್ಷಿಣ ಕೊರಿಯಗಳ ನಡುವೆ ವಿರಸ ಬೆಳೆದು 1950 ರಲ್ಲಿ ಯುದ್ಧ ಪ್ರಾರಂಭವಾಯಿತು.  ಉತ್ತರ ಕೊರಿಯಕ್ಕೆ ಚೀನವೂ, ದಕ್ಷಿಣ ಕೊರಿಯಕ್ಕೆ ವಿಶ್ವಸಂಸ್ಥೆಯ ಹೆಸರಿನಲ್ಲಿ ಅಮೆರಿಕವೂ ಸೇರಿದಂತೆ 16 ರಾಷ್ಟ್ರಗಳ ಸೈನ್ಯಗಳೂ ಬೆಂಬಲ ನೀಡಿದುವು.  1953 ರಲ್ಲಿ ಎರಡೂ ಪಕ್ಷಗಳ ನಡುವೆ ಷಾನ್‍ಮುಂಜಾಮ್‍ನಲ್ಲಿ ಕದನವಿರಾಮ ಒಪ್ಪಂದವಾಯಿತು.  ಎರಡೂ ಕಡೆ ನಿಶ್ಯಸ್ತ್ರೀಕೃತ ಪ್ರದೇಶ ಇರುವ ಪ್ರಕೃತದ ಗಡಿ ರೇಖೆಯನ್ನು ನಿರ್ಧರಿಸಲಾದ್ದು ಆಗ.

ಆದರೂ ದಕ್ಷಿಣ ಕೊರಿಯದಲ್ಲಿ ಶಾಂತಿ ನೆಲೆಸಿರಲಿಲ್ಲ.  ಅಧ್ಯಕ್ಷರಾಗಿದ್ದ ಸಿಂಗಮನ್ ರ್ಹೀ 1960 ರಲ್ಲಿ ರಾಜೀನಾಮೆ ನೀಡಿದ ಮೇಲೆ ಪರಿಸ್ಥಿತಿ ಗೊಂದಲಮಯವಾಯಿತು.  1961 ರಲ್ಲಿ ಸೈನ್ಯದ ಕ್ಷಿಪ್ರಾಕ್ರಮಣ ನಡೆಯಿತು.  1963 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದು ಅಸೈನಿಕ ಸರ್ಕಾರ ಪುನಃ ಸ್ಥಾಪಿತವಾಯಿತು. ಪಾರ್ಕ್‍ಚುಂಗ್ ಹೀ ಅಧ್ಯಕ್ಷರಾದರು. ಅವರು ಅನೇಕ ಆರ್ಥಿಕ ಮತ್ತು ರಾಜಕೀಯ ಸುಧಾರಣೆಗಳನ್ನು ಕೈಗೊಂಡರು.  1965 ರಲ್ಲಿ ಜಪಾನಿನೊಡನೆ ಪ್ರಸಾಮಾನ್ಯ ಸಂಬಂಧ ಸ್ಥಾಪಿಸುವ ಕೌಲಿಗೆ ಸಹಿಯಾಯಿತು. ಇದರಿಂದ ಅವರ ಜನಪ್ರಿಯತೆ ಕುಗ್ಗಿತು.  ಆದರೂ ಅವರು 1967 ರಲ್ಲಿ  ಹೆಚ್ಚಿನ ಬಹುಮತಗಳಿಸಿ ಪುನಃ ಅಧ್ಯಕ್ಷರಾಗಿ ಚುನಾಯಿತರಾದರು. 1971ರ ಚುನಾವಣೆಯ ಅನಂತರವೂ ಅವರೇ ಅಧಿಕಾರದಲ್ಲಿ ಮುಂದುವರಿದರು.  ಅದರ ಪರಿಸ್ಥಿತಿ ಮತ್ತೆ ಪ್ರಕ್ಷುಬ್ಧವಾಯಿತು.  ಸ್ವಲ್ಪ ಕಾಲ ಲಷ್ಕರಿ ಶಾಸನ ಜಾರಿಗೆ ಬಂತು.  ಅನಂತರ ಮತ್ತೆ ಚುನಾವಣೆಗಳು ನಡೆದವು.  ಸಂವಿಧಾನದಲ್ಲಿ ಬದಲಾವಣೆಗಳಾದವು.  ಇದಕ್ಕೆ ಮುಂಚೆ, 1972 ರ ಜುಲೈಯಲ್ಲಿ ಉತ್ತರ ಕೊರಿಯದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಳ್ಳಲಾಯಿತು.  ಉತ್ತಮ ದಕ್ಷಿಣ ಕೊರಿಯಗಳ ಏಕೀಕರಣಕ್ಕೆ ಶಾಂತಿಯುತ ವಿಧಾನಗಳನ್ನೇ ಅನುಸರಿಸಬೇಕು.  ಪರಸ್ಪರ ಅಪಪ್ರಚಾರ ನಿಲ್ಲಬೇಕು.  ಉತ್ತರ - ದಕ್ಷಿಣ ಕೊರಿಯಗಳ ರಾಜಧಾನಿಗಳ ನಡುವೆ ನೇರ ಸಂಪರ್ಕ ಏರ್ಪಡಬೇಕು.  ಎರಡೂ ಸರ್ಕಾರಗಳ ನಡುವೆ ಹೆಚ್ಚಿನ ಸಂಬಂಧ ಬೆಳೆಯಬೇಕು-ಎಂದು ಒಪ್ಪಂದದಲ್ಲಿ ಹೇಳಲಾಗಿದೆ.  ಎರಡು ಭಾಗಗಳನ್ನೂ ಒಂದುಗೂಡಿಸುವ ಪ್ರಯತ್ನಗಳು ಇದುವರೆಗೂ ಫಲಕಾರಿಯಾಗಲಿಲ್ಲ.  ಪ್ರಯತ್ನಗಳು ಮುಂದುವರಿಯುತ್ತಿವೆ.
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ